Esuru: First village in India to get Independence

ಈಸೂರು ಗ್ರಾಮ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70ವರ್ಷಗಳಾಗಿದೆ ಅಂತ ನಮ್ಮೆಲ್ಲರಿಗು ಗೊತ್ತು. ಆದರೆ ನಮ್ಮ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಎಂಬ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಹೌದು, ಇಡೀ ಭಾರತದಲ್ಲಿ ಬ್ರಿಟೀಷರಿಂದ ಮೊದಲು ಸ್ವಾತಂತ್ರ್ಯ ಪಡೆದ ಹಳ್ಳಿ ನಮ್ಮ ಈಸೂರು. ಹೇಗೆ ಅಂತ ತಿಳ್ಕೋಬೇಕಾ? ಕೆಳಗೆ ಓದಿ.

ಈಸೂರು ಗ್ರಾಮ ಇರೋದು ಶಿಕಾರಿಪುರ ತಾಲ್ಲೂಕಿನಲ್ಲಿ. ಇದೊಂದು ಪುಟ್ಟ ಹಳ್ಳಿ. ಹಳ್ಳಿ ಪುಟ್ಟದಾದ್ರು ಹಳ್ಳಿ ಜನ ಸಾಮಾನ್ಯರಲ್ಲ. ಈ ಹಳ್ಳಿ ಜನದ ರಕ್ತ ಸ್ವಾತಂತ್ರ್ಯಕ್ಕಾಗಿ ಕುದಿತಾಯಿತ್ತಂತೆ. ಅಷ್ಟು ಧೈರ್ಯಶಾಲಿಗಳು ಇವ್ರು.1942 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯೋದಕ್ಕೆ ತಂಬ ಹೋರಾಟಗಳಾಗ್ತಾ ಇದ್ದವು ಅಂತ ನಮಗೆಲ್ಲಾ ಗೊತ್ತು. ಗಾಂಧೀಜಿಯವರ ಮಾತುಗಳಿಂದ ಪ್ರೇರೇಪಿತರಾದ ಈ ಗ್ರಾಮದ ಜನ ಸ್ವಾತಂತ್ರ್ಯ ಪಡೆದೇ ತೀರಬೇಕು ಅಂತ ಪಣ ತೊಟ್ಟಿದ್ರಂತೆ, ಹಾಗಂತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಂತೆ ಇರುವ ಹುಚ್ಚುರಾಯಪ್ಪನವರು ಹೇಳ್ತಾರೆ.

ಈಸೂರಿನ ಸ್ವಾತಂತ್ರ್ಯ
ಹೋರಾಟಗಾರರು

ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿದ್ದಕ್ಕಾಗಿ ಶುರುವಾದ ಹೋರಾಟ, ತೆರಿಗೆ ಕಟ್ಟುವುದಕ್ಕೆ ವಿರೋದ ವ್ಯಕ್ತಪಡಿಸಿ ಪ್ರಮುಖ ದಾಖಲೆಗಳನ್ನೆಲ್ಲಾ ನಾಶ ಮಾಡಿ, 28-8-1942 ರಂದು ಹಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಮೇಲೆ ನಮ್ಮ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿಯೇ ಬಿಡ್ತಾರೆ. ಇದರಿಂದ ಆಕ್ರೋಶಗೊಂಡ ಬ್ರಿಟಿಷ್ ಅಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿದ್ದ ೫ ಜನರನ್ನ ಮಾರ್ಚ್ 1943ರಲ್ಲಿ ಬೆಂಗಳೂರು ಜೈಲಿನಲ್ಲಿ ಗಲ್ಲಿಗೇರಿಸ್ತಾರೆ.
ಗುರಪ್ಪ ಈಶ್ವರಪ್ಪ ಕುಮಾರ್- 8-3-1943
ಜನಹಳ್ಳಿ ಮಲ್ಲಪ್ಪ – 8-3-1943
ಸೂರ್ಯನಾರಾಯಣಾಚಾರ್- 9-3-1943
ಬಡೇಹಳ್ಳಿ ಹಾಲಪ್ಪ- 9-3-1943
ಗೌಡ್ರು ಶಂಕರಪ್ಪ – 10-3-1943 ರಂದು ಈ 5 ಜನರನ್ನ ಗಲ್ಲಿಗೇರಿಸಲಾಗುತ್ತದೆ. ಇದೇ ಸಮಯದಲ್ಲಿ ಗ್ರಾಮದ ಸಾಹುಕಾರ್ ಬಸಪ್ಪನವರ ಮನೆಯನ್ನು ಸಹ ಬ್ರಿಟಿಷರು ಸುಟ್ಟು ಹಾಕಿದ್ರಂತೆ.
ಗ್ರಾಮದ ಪ್ರವೇಶ ದ್ವಾರಕ್ಕೆ ಈ ಹಳ್ಳಿ ಜನ ಒಂದು ಬೋರ್ಡ್ ಕೂಡ ಹಾಕಿದ್ರಂತೆ, ಇಂಗ್ಲಿಷ್‌ ನಾಯಿಗಳಿಗೆ ಗ್ರಾಮದ ಒಳಗೆ ಪ್ರವೇಶವಿಲ್ಲ ಅಂತ. ಇದರಿಂದ ಶಿಕ್ಷೆ ಆಗತ್ತೆ ಅಂತ ಗೊತ್ತಿದ್ರು ಯಾರು ಹೆದರಲಿಲ್ಲ ಅಂತ ಹುಚ್ಚರಾಯಪ್ಪನವರ ಸೊಸೆ ನೆನಪಿಸಿಕೊಳ್ಳುತ್ತಾರೆ.

ಸುಟ್ಟು ಹಾಕಿರುವ ಸಾಹುಕಾರ್ ಬಸಪ್ಪನವರ ಮನೆ

ಗಂಡಸರು ಮಾತ್ರವಲ್ಲದೆ ಹೆಂಗಸರು ಮಕ್ಕಳು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಮತ್ತು ದೇಶದಲ್ಲೇ ಸ್ವಾತಂತ್ರ್ಯ ಪಡೆದ ಮೊದಲ ಗ್ರಾಮ ಅಂತ ಖ್ಯಾತಿ ಕೂಡ ಪಡ್ಕೊಂಡಿದ್ದಾರೆ.
ಗಾಂಧೀಜಿ, ಸುಭಾಷ್ ಚಂದ್ರ ಭೋಸ್ ಈಸೂರು ಗ್ರಾಮದ ಜನರ ಧೈರ್ಯಕ್ಕೆ ಪ್ರಶಂಸಿಸಿದ್ರಂತೆ, ಹೋರಾಟದ ಸಮಯದಲ್ಲಿ ನಮ್ಮ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರವರು ‘ಈ ಸೂರು ಬಿಟ್ಟೆವು ಆದರೆ ಈಸೂರು ಬಿಡೆವು’ ಅಂತ ಘೋಷಿಸಿ ಬೆಂಬಲಿಸಿದ್ರಂತೆ.
ಈಗಲೂ ಕೂಡ ಈ ಹಳ್ಳಿಯ ಪುಟ್ ಪುಟ್ ಮಕ್ಕಳು ಅವರ ಅಜ್ಜ ಅಜ್ಜಿಯವರಿಂದ ಕೇಳಿ ತಿಳಿದುಕೊಂಡ ಸ್ವಾತಂತ್ರ್ಯ ಹೋರಾಟದ ಕಥೆ ಹೇಳ್ತಾರೆ. ಸ್ವಾತಂತ್ರ್ಯ ಪಡೆಯೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಅಲ್ವಾ. ನಾವು ನಿಜವಾಗಿಯೂ ಅದ್ರೃಷ್ಟ ಮಾಡಿದ್ದೀವಿ. ನಮಗೆ ಇಂಗ್ಲಿಷ್‌ ನಾಯಿಗಳ ಹಂಗಿಲ್ಲ.

ಸ್ಮಾರಕ

ಆ 5 ಜನ ಹೋರಾಟಗಾರರ ನೆನಪಿಗಾಗಿ 1968-69ರಲ್ಲಿ ಸರ್ಕಾರದಿಂದ ಒಂದು ಸ್ಮಾರಕ ನಿರ್ಮಾಣ ಆಗತ್ತೆ. ಆ ಸ್ಮಾರಕ ಈಗಲೂ ಈಸೂರು ಗ್ರಾಮದಲ್ಲಿದೆ. ನೀವೇನಾದ್ರು ಶಿಕಾರಿಪುರ ಕಡೆ ಹೋದ್ರೆ ಖಂಡಿತ ಈ ಹಳ್ಳಿನ ಒಮ್ಮೆ ನೋಡಿ ಬನ್ನಿ. ಇಂಥ ಕಥೆಗಳನ್ನ ಕೇಳಿದ್ರೆ ನಮ್ ಶಿವಮೊಗ್ಗ ಬಗ್ಗೆ ಎಷ್ಟು ಹೆಮ್ಮೆ ಆಗತ್ತೆ ಅಲ್ವಾ.

ಜೈ ಭಾರತಾಂಬೆ.

Leave a Comment

twelve + two =

ShimogaSiri

K R Puram

Shivamogga

Karnataka

577202

9611875511